ಇರಾಸ್  
ಕ್ಷುದ್ರಗ್ರಹಗಳ (ಆಸ್ಟಿರಾಯಿಡ್ಸ್) ಪೈಕಿ ಒಂದು. ವ್ಯಾಸ 32-48 ಕಿ.ಮೀ. ಬೀರುವ ಕಾಂತಿ (ಸೂರ್ಯಪ್ರಕಾಶದ ಪ್ರತಿಫಲನ) ಬಲು ಚಂಚಲ. ಇದೊಂದು ಕಿರಿಯ ಆಕಾಶಶಿಲೆ; ಸೌರವ್ಯೂಹದ ಮೂಲ ಇಟ್ಟಿಗೆಗಳಲ್ಲೊಂದು. ಇಂಥ ಇಟ್ಟಿಗೆಗಳು ಒಂದುಗೂಡಿ ಗ್ರಹಗಳಾದುವೆಂದೂ ಹಾಗಾಗದೆ ಉಳಿದವು ಕ್ಷುದ್ರಗ್ರಹಗಳೆಂದೂ ಕೆಲವು ವಿe್ಞÁನಿಗಳ ಅಭಿಮತ, ಮಂಗಳ, ಗುರು ಗ್ರಹಗಳ ಕಕ್ಷೆಗಳ ನಡುವೆ (ಎಂದರೆ ಸೂರ್ಯನಿಂದ ಸುಮಾರು 1.52 ಮತ್ತು 5.2 ಖಗೋಲ ಮಾನಗಳು 1 ಖ.ಮಾ= 9,30,00,000 ಮೈ.) ಕ್ಷುದ್ರಗ್ರಹಗಳಿವೆ. ಇವು (ಇದುವರೆಗೆ ಗುರುತಿಸಿರುವಂತೆ) ವಿವಿಧ ಗಾತ್ರ ಆಕಾರಗಳ ಸುಮಾರು 1300 ಬಿಡಿ ತುಂಡುಗಳ ಸಮುದಾಯ; ಇವುಗಳ ಸಾಮೂಹಿಕ ಕಕ್ಷೆಗಳ ವ್ಯಾಪ್ತಿ ಸುಮಾರು 2.17-3.45 ಖ.ಮಾ. ಕೆಲವು ಬಿಡಿ ತುಂಡುಗಳ ಕಕ್ಷೆಗಳು ಆಶ್ಚರ್ಯಕರವೆನಿಸುವಷ್ಟು ಪ್ರತ್ಯೇಕವಾಗಿವೆ. ಇಕಾರಸ್ (ನೋಡಿ- ಇಕಾರಸ್) ಇಂಥ ಒಂದು ಬಿಡಿ ತುಂಡಾದರೆ ಇರಾಸ್ ಇನ್ನೊಂದು. ಭೂಮಿಗೆ ಅತಿಸಮೀಪ ಆಗಮಿಸುವ ಆಕಾಶಕಾಯಗಳಲ್ಲಿ ಚಂದ್ರನ ತರುವಾಯ ಇರಾಸಿಗೆ ಪ್ರಥಮಸ್ಥಾನ. ಇದೇ  ಅದರ ವೈಶಿಷ್ಟ್ಯ. ಭೂಮಿ-ಇರಾಸ್ ಅಂತರದ ಕನಿಷ್ಠ ಬೆಲೆ ಸುಮಾರು 1,38,40,000 ಮೈ. (ಭೂಮಿ-ಚಂದ್ರ ಅಂತರದ ಸರಾಸರಿ ಬೆಲೆ 2,39,000 ಮೈ.) ಇಂಥ ಅನುಕೂಲ ಸಂದರ್ಭವನ್ನು ಉಪಯೋಗಿಸಿಕೊಂಡು ಸೂರ್ಯ-ಭೂಮಿ ಅಂತರದ ನಿಖರ ಬೆಲೆ ಅಳೆಯುತ್ತಾರೆ. ಇರಾಸಿನ ಕಕ್ಷೆಯ ಉತ್ಕೇಂದ್ರತೆ (ಎಕ್ಸೆಂಟ್ರಿಸಿಟಿ) 0.22; ಅರ್ಧ ದೀರ್ಘಾಕ್ಷ 1.46 ಖ.ಮಾ.; ಕಕ್ಷಾತಲ, ಕ್ರಾಂತಿವೃತ್ತಗಳ ನಡುವಿನ ಕೋನ 10-8ಲಿ. ನಾಕ್ಷತ್ರಿಕ ಅವಧಿ (ಸೂರ್ಯನನ್ನು ಒಂದು ಸಲ ಪರಿಭ್ರಮಿಸಲು ಬೇಕಾಗುವ ಕಾಲ) 1.76 ವರ್ಷಗಳು (1 ವರ್ಷ=365,2422 ದಿವಸಗಳು). ಈ ಕ್ಷುದ್ರಗ್ರಹ ಬಾಹ್ಯಾಕಾಶದಿಂದ ಅನೇಕ ಅಧ್ಯಯನಕ್ಕೆ ಒಳಪಟ್ಟಿದೆ.
										* 
(ಪರಿಷ್ಕರಣೆ: ಬಿ.ಎಸ್.ಶೈಲಜಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ